ರಾಚಮಲ್ಲ 4

 	 ದಕ್ಷಿಣ ಭಾರತದ ಪ್ರಸಿದ್ಧ ರಾಜಮನೆತನವಾದ ತಲಕಾಡು ಗಂಗವಂಶದ ದೊರೆ (ಸು. 974-99). ಇಮ್ಮಡಿ ಮಾರಸಿಂಹನ ಮಗ. ತಂದೆಯ ಮರಣಾನಂತರ ಸಿಂಹಾಸನಕ್ಕಾಗಿ ತನ್ನ ತಮ್ಮನಾದ ನೀತಿಮಾರ್ಗ ಗೋವಿಂದರಸನೊಡನೆ ಕಲಹಗಳು ಪ್ರಾರಂಭವಾದವು. ಆಗ ಮಾರಸಿಂಹನ ಮಂತ್ರಿಯಾಗಿದ್ದ ಚಾವುಂಡರಾಯ ರಾಚಮಲ್ಲನಿಗೆ ಸಹಾಯಕನಾಗಿ ನಿಂತ. ಈ ಕಲಹದಲ್ಲಿ ರಾಚಮಲ್ಲ ಜಯಶಾಲಿಯಾದ. ಆದರೆ ಇದೇ ಸಮಯದಲ್ಲಿ ಪ್ರಬಲನಾಗುತ್ತಿದ್ದ ಚಾಳುಕ್ಯ ಇಮ್ಮಡಿ ತೈಲ ಇಬ್ಬರನ್ನೂ ಸೋಲಿಸಿ, ಗಂಗರಾಜ್ಯದ ಉತ್ತರ ಭಾಗಗಳನ್ನು ತನ್ನ ಅಧೀನಕ್ಕೆ ತೆಗೆದುಕೊಂಡ. ಆದರೆ ರಾಚಮಲ್ಲ ಗಂಗರಾಜ್ಯದ ದಕ್ಷಿಣ ಭಾಗದಲ್ಲಿ ಆಳಿಕೊಂಡಿದ್ದ. ಕೊನೆಗೆ ಚೋಳರು ಇವನನ್ನು ಸೋಲಿಸಿ, ಇವನ ರಾಜ್ಯವನ್ನು ತಮ್ಮದನ್ನಾಗಿ ಮಾಡಿಕೊಂಡರು.		
			 *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ